ಜಪಾನೀ ಪುರಾಣ-
ಜಪಾನೀ ಜನರ ಪೂರ್ವಜರು ಕೊರಿಯ ದೇಶದಿಂದ ಬಂದವರು. ಇಲ್ಲಿಗೆ ಬಂದೊಡನೆ ಐನೂ ಆದಿವಾಸಿಗಳೊಂದಿಗೆ ಕಾದಾಡಿ ಅವರನ್ನು ಉತ್ತರ ಭಾಗಕ್ಕಟ್ಟಿದರು. ದಕ್ಷಿಣದಲ್ಲಿ ಹಲವಾರು ಆದಿವಾಸಿ ಜನಾಂಗಗಳ ಸಂಪರ್ಕಕ್ಕೆ ಬಳಗಾದರು. ಮೊದಲು ಬುಡಕಟ್ಟುಗಳಲ್ಲಿಯೇ ವಾಸಿಸುತ್ತ ಇದ್ದ ಜಪಾನೀ ಜನಕ್ಕೆ ಬಹುಮಟ್ಟಿಗೆ ಹೆಂಗಸರೇ ಮುಖ್ಯ ಅಧಿಕಾರಿಗಳಾಗಿರುತ್ತಿದ್ದರು. ಕೊರಿಯದೊಂದಿಗೆ ಮತ್ತು ಇತರ ಏಷ್ಯ ಸಂಸ್ಕøತಿಯೊಂದಿಗೆ ಈ ಜನ ನಂಟನ್ನು ಉಳಿಸಿಕೊಂಡೇ ಇದ್ದರಾಗಿ, ಅವರಲ್ಲಿ ಮೂಡಿಬಂದ ಪೌರಾಣಿಕ ಕಲ್ಪನೆಗಳಲ್ಲಿ ಈ ದೇಶದ ಪ್ರಭಾವ ಕಾಣಬರುತ್ತದೆ. ದಕ್ಷಿಣದ ಆದಿವಾಸಿಗಳ ಕಲ್ಪನೆಗಳೂ ಇಲ್ಲಿ ಸೇರಿಬಂದಿವೆ. ಆದರೂ ಪ್ರಾದೇಶಿಕ ವೈವಿಧ್ಯ ಸ್ಪಷ್ಟವಾಗಿದೆ.

ಮುಖ್ಯವಾಗಿ ಜಪಾನೀ ಪುರಾಣಕಥೆಗಳು ಜಪಾನೀ ರಾಜವಂಶದ ಉಗಮವನ್ನು ಕುರಿತವು. ಇವನ್ನು ಕತರಿ-ಬೆ ಎಂಬ ಕುಶೀಲವರು ಹಾಡು ಗಬ್ಬಗಳಲ್ಲಿ ಮೂಡಿಸಿ, ಕಾಲ ಕಾಲಕ್ಕೆ ವಿಶೇಷ ಸಂದರ್ಭಗಳಲ್ಲಿ ಜನರೆದುರು ಹಾಡುತ್ತ ಉಳಿಸಿಕೊಂಡು ಬಂದರು. ಷಿಂಟೋ ಧಾರ್ಮಿಕ ಸಮಾರಂಭಗಳಲ್ಲಿ ಈ ಪಾಠಕರು ಇದ್ದೇ ಇರುತ್ತಿದ್ದರು. ಶ್ರೀಮಂತರ ಮನೆಗಳಲ್ಲಿಯೂ ರಾಜರ ಎದುರೂ ಇವರು ಈ ಪುರಾಣ ಕಥೆಗಳನ್ನು ನಿರೂಪಿಸುತ್ತಿದ್ದರು. ದೇವತೆಗಳ ಮತ್ತು ಪಿತೃಗಳ ಪ್ರಸ್ತಾಪ ಈ ಕಥೆಗಳಲ್ಲಿ ವಿಶೇಷವಾಗಿ ಬರುತ್ತಿತ್ತು. ಕ್ರಿ.ಶ. ಎಂಟನೆಯ ಶತಮಾನದ ಆದಿಭಾಗದವರೆಗೆ ಇವು ಮೌಖಿಕ ಪರಂಪರೆ ಆಗಿಯೇ ಉಳಿದುವು. ಅಲ್ಲಿಂದ ಮುಂದೆ ಜಪಾನೀ ಇತಿಹಾಸಕಾರರು ಈ ಕಥೆಗಳನ್ನು ತಂತಮ್ಮ ಗ್ರಂಥಗಳಲ್ಲಿ ಬಳಸಿಕೊಳ್ಳಲಾರಂಭಿಸಿದರು.

ಚೀನೀ ಪಾಂಡಿತ್ಯ ಜಪಾನನ್ನು ಮುಟ್ಟಿದುದು ಕ್ರಿ.ಶ. 405ರಲ್ಲಿ; ಆಗಲೇ ಚೀನೀ ಬರೆಹ ಪದ್ಧತಿಯೂ ಇಲ್ಲಿಗೆ ಬಂತು. 522ರ ಸುಮಾರಿಗೆ ಕೊರಿಯದ ಮೂಲಕ ಬೌದ್ಧಧರ್ಮವೂ ಇಲ್ಲಿಗೆ ಬಂದು ಕಾಲಕ್ರಮದಲ್ಲಿ ದೇಶದ ಆಡಳಿತಧರ್ಮವಾಗಿ ಪರಿಣಮಿಸಿತು. ಇದು ಯೋಮೈ ಚಕ್ರವರ್ತಿಯ (585-587) ಕಾಲದ ಮಾತು. ಜಪಾನೀ ಪುರಾಣಗಳಲ್ಲಿ ಬೌದ್ಧಧರ್ಮವೇ ಮುಖ್ಯ ವಿವರವಾಗಿ ಬಂದಿರುವುದು ಈ ಕಾರಣದಿಂದ. 672ರಲ್ಲಿ ಜಪಾನೀ ರಾಜ್ಯಭಾರವನ್ನು ವಹಿಸಿಕೊಂಡ ಚಕ್ರವರ್ತಿ ತೆಮ್ಮು ಪ್ರಾಚೀನ ಪುರಾಣಕಥೆಗಳನ್ನು ಮೊಟ್ಟಮೊದಲಬಾರಿಗೆ ಗ್ರಂಥಗಳಲ್ಲಿ ಬರೆಸುವ ವ್ಯವಸ್ಥೆಮಾಡಿದ. ಮುಂದೆ ಚಕ್ರವರ್ತಿನಿಯಾದ ಗೆಮ್ಮ್ಯೋ (707-715) ತನ್ನ ರಾಜ್ಯದಲ್ಲಿ ಪ್ರಚಲಿತವಾಗಿದ್ದ ಎಲ್ಲ ಕಥೆಗಳನ್ನೂ ಸಂಗ್ರಹಿಸಿ ಬರೆಸಿಟ್ಟಳು. 712ರಲ್ಲಿ ಪೌರಾಣಿಕ ಕಥಾಸಂಗ್ರಹ ಕೋಜಿಕಿ ಎನ್ನುವ ಹೆಸರಿನಿಂದ ಬಹುಮಟ್ಟಿಗೆ ಚೀನೀ ಲಿಪಿಯಲ್ಲಿ ಮೂಡಿಬಂತು. ರಾಜವಂಶಾವಳಿಯನ್ನು ವಿವಾದಕ್ಕೆಡೆಯಿಲ್ಲದಂತೆ ನಿಶ್ಚಯಿಸಿ ನಿರೂಪಿಸುವುದೇ ಈ ಸಂಗ್ರಹದ ಮುಖ್ಯ ಉದ್ದೇಶವಾಗಿತ್ತು. 714ರಂದು ಈ ಚಕ್ರವರ್ತಿನಿಯೇ ಜಪಾನೀ ರಾಷ್ಟ್ರೇತಿಹಾಸವನ್ನೂ ಪ್ರಕಟಿಸಲು ಅಪ್ಪಣೆ ಮಾಡಿದಳು. ಇದರ ಮೊದಲ ಭಾಗ (ಜಿಂದೈಕಿ) ದೇವತೆಗಳನ್ನು ಕುರಿತದ್ದು. ಪ್ರಾಚೀನ ಕಥೆಗಳ ಇನ್ನೊಂದು ಸಂಗ್ರಹ 807ರಲ್ಲಿ ಇಮಿಬೆ ನೊ ಹಿರೋನರಿ ಎಂಬ ಕವಿಯಿಂದ ಸಿದ್ಧವಾಯಿತು. ಇದರ ಹೆಸರು ಕೊಗೋಷುಇ. ಇದರಲ್ಲಿಯೇ ಪುರಾಣಕಥೆಗಳ ದೊಡ್ಡ ಸಂಕಲನವಿರುವುದು. ಅದೇ ಸುಮಾರಿಗೆ ಪ್ರಾದೇಶಿಕ ಕಥೆಗಳನ್ನು ಒಂದೆಡೆ ಕಲೆಹಾಕಿ ಫುಡೋಕಿಗಳೆಂಬ ಪುರಾಣ ಪರಿಚ್ಛೇದಗಳಲ್ಲಿ ಬರೆಸಿಟ್ಟರು. ಇವುಗಳಲ್ಲಿ ಐದು ಮಾತ್ರ ಈಗ ಉಳಿದಿವೆ.

ಜಪಾನೀ ಪುರಾಣಗಳಲ್ಲಿ ಮೂಲಭೂತವಾಗಿ ಕಮಿ ಎನ್ನುವ ಪ್ರಕೃತಿ ದೇವತೆಗಳು ಬರುತ್ತಾರೆ. ತುಂಬ ಶಕ್ತರಾದ ಇವರು ಬೆಟ್ಟಗಳ ಮೇಲೆ, ಮರಗಳಲ್ಲಿ, ನದಿಗಳಲ್ಲಿ ವಾಸಿಸುತ್ತಾರೆಂದು ನಂಬಿಕೆ. ಮನುಷ್ಯಾಕಾರದಲ್ಲಿಯೇ ಇದ್ದು ಮನುಷ್ಯ ಸ್ವಭಾವವನ್ನೇ ಪಡೆದ ಈ ದೇವತೆಗಳಿಗೆ ಎರಡು ಜೀವಗಳು: ಒಂದು ಸತ್ತ್ವ ಪ್ರಧಾನವಾದುದು (ನಿಗಿ-ಮಿ-ತಮ) ಇನ್ನೊಂದು ರಜೋಗುಣ ಪ್ರಧಾನವಾದುದು (ಅರ-ಮಿ-ತಮ). ಹೀಗೆ ದೇವತೆಗಳು ಹಿತವನ್ನೂ ಅಹಿತವನ್ನೂ ಉಂಟುಮಾಡುವರು. ಆದರೆ ದೇವತೆಗಳಲ್ಲಿ ದುಷ್ಟದೇವತೆಗಳೆಂಬುದಿಲ್ಲ. ಕೆಲವು ಸ್ವರ್ಗದಲ್ಲಿದ್ದಾರೆ. ಕೆಲವರು ನರಕದಲ್ಲಿದ್ದಾರೆ. ಒಮ್ಮೊಮ್ಮೆ ಇವರಿಂದ ಉಪದ್ರವಗಳೂ ತೊಂದರೆಗಳೂ ಆಗುವುದುಂಟು, ಆದರೆ ದೇವತೆಗಳು ಎಲ್ಲವನ್ನೂ ಮತ್ತೆ ನೆಟ್ಟಗೆಮಾಡುವ ಶಕ್ತಿಯುಳ್ಳವರು. ರೋಗಕ್ಕೆ, ಕ್ಷಾಮಕ್ಕೆ, ಉಪದ್ರವಕ್ಕೆ ಕಾರಣರಾದ ದುಷ್ಟಸತ್ತ್ವಗಳನ್ನು ಜಪಾನೀ ಜನ ನಂಬುತ್ತಾರೆ. ಆದರೆ ಇವೆಲ್ಲ ಕಮಿ ದೇವತವರ್ಗಕ್ಕೆ ಕೆಳಗಿನ ಮಟ್ಟದಲ್ಲಿರುವುವು.

ಅವರಲ್ಲಿ ಸ್ವರ್ಗ (ಅಮ), ಭೂಮಿ, ನರಕ (ಯೋಮಿ-ತ್ಸು-ಕುನಿ) ಎನ್ನುವ ಮೂರು ನೆಲೆಗಳಿವೆ. ಮೊದಲಿಗೆ ಭೂಮಿಗೂ ಸ್ವರ್ಗಕ್ಕೂ ಸೇತುವೆಯೊಂದಿದ್ದಿತು (ಅಮ-ನೋ-ಹಶೀದಾತೆ). ಇದರ ಮೂಲಕ ದೇವತೆಗಳು ಸ್ವರ್ಗದಿಂದ ಭೂಮಿಗೆ ಬಂದು ಮರಳುತ್ತಿದ್ದರು. ಒಮ್ಮೆ ದೇವತೆಗಳೆಲ್ಲ ನಿದ್ರಿಸುತ್ತಿದ್ದಾಗ ಈ ಸೇತುವೆಯ ಒಂದು ಭಾಗ ಸಮುದ್ರದಲ್ಲಿ ಬಿದ್ದುಹೋಯಿತಂತೆ; ಕೀಯೋಟೋಗೆ ಪಶ್ಚಿಮ ಭಾಗದಲ್ಲಿ ಈ ಸ್ಥಳವನ್ನು ಈಗಲೂ ತೋರಿಸುತ್ತಾರೆ. ಸ್ವರ್ಗದಲ್ಲಿರುವ ದೇವತೆಗಳಿಗೆ ಅಮ-ತ್ಸು-ಕಮಿ ಎಂದು ಹೆಸರು; ಭೂಮಿಯ ಮೇಲಿರುವ ದೇವತೆಗಳು ಕುನಿ-ತ್ಸು-ಕಮಿ ಎನಿಸಿಕೊಳ್ಳುತ್ತಾರೆ. ಭೂಮಿಯ ದೇವತೆಗಳ ಸಂಖ್ಯೆಯೇ ಹೆಚ್ಚು : ಅವರೆಲ್ಲರೂ ಬಹುಮಟ್ಟಿಗೆ ಜಪಾನಿನಲ್ಲೇ ಇರುವವರು. ಭೂಮಿಯ ಕೆಳಗಿರುವ ನರಕ ಕತ್ತಲೆಯ ಪ್ರದೇಶ, ಇಜûೂಮೋ ಪ್ರಾಂತ್ಯದಲ್ಲಿ ಭೂಗರ್ಭಕ್ಕಿಳಿಯುವ ರಸ್ತೆಯೊಂದರ ಮೂಲಕ ನರಕವನ್ನು ಮುಟ್ಟಬಹುದು; ಇದು ಒಂದು ದಾರಿಯಾದರೆ ಸಮುದ್ರ ತೀರದಿಂದ ಇನ್ನೊಂದು ದಾರಿಯಿದೆ; ನರಕವೆಂದರೆ ಅಡಿಯೇ ಇಲ್ಲದ ಆಳ ; ಇಲ್ಲಿ ಕ್ರೂರ ರಾಕ್ಷಸರೂ ಕುರೂಪಿ ರಾಕ್ಷಸಿಯರೂ ಇರುತ್ತಾರೆ. ಅವರಿಗೆ ಮನೆಗಳೂ ಇರುತ್ತವೆ. ಜಪಾನೀ ಪುರಾಣಗಳಲ್ಲಿ ನರಕವೆಂದರೆ ಮೃತಕನ ಜೀವವಿರುವ ಸ್ಥಳವಲ್ಲ.

ಸ್ವರ್ಗವೂ ಭೂಮಿಯೂ ಮೈದಳೆಯುವ ಮೊದಲು ದೇವತೆಗಳ ಏಳು ತಲೆಮಾರುಗಳ ಅನಂತರ ಈಜಾóನಾಗೀ ಮತ್ತು ಈeóÁನಾಮೀ ಎಂಬ ದಂಪತಿಗಳಿದ್ದರು. ಆಗ ಭೂಮಿಯು ನೀರಿನ ಮೇಲೆ ತೇಲುವ ಎಣ್ಣೆಯಂತೆ ಇತ್ತು. ಈ ದಂಪತಿಗಳು ಸ್ವರ್ಗಸೇತುವೆಯ ಮೇಲೆ ನಿಂತು ಈ ಹರಿಯುವ ಭೂಮಿಯನ್ನು ಭರ್ಜಿಯಿಂದ ಚೆನ್ನಾಗಿ ಕದಡಿದರು. ನೊರೆ ಕಾಣಿಸಿಕೊಂಡಾಗ ಭರ್ಜಿಯನ್ನು ಮೇಲೆ ತೆಗೆದು ಪಕ್ಕಕ್ಕಿರಿಸಿದರು. ಆಗ ಅದರ ಮೊನೆಯಿಂದ ಭೂಮಿಯ ಹನಿಯೊಂದು ಕೆಳಗೆ ಬಿತ್ತು. ಇದೇ ಓನೋ ಕೊರೊ ಎಂಬ ದ್ವೀಪ. ಇಲ್ಲಿ ದಿವ್ಯದಂಪತಿಗಳು ನೆಲಸಿದರು. ಒಂದು ಕಂಬವನ್ನು ನೆಟ್ಟು, ಮನೆಯನ್ನೂ ಮಾಡಿಕೊಂಡರು. ಒಮ್ಮೆ ಕಂಬದ ಸುತ್ತಲೂ ಇಬ್ಬರೂ ಆಟವಾಡುತ್ತಿದ್ದರು. ಈಜಾóನಾಗೀ ಎಡದಿಂದಲೂ ಈeóÁನಾಮೀ ಬಲಬಾಗದಿಂದಲೂ ಬಂದು ಒಟ್ಟಿಗೆ ಕಲೆತರು. ಈeóÁನಾಮಿ 'ಎಂಥ ಚೆಲುವ! ಎಂದು ಉದ್ಗಾರ ತೆಗೆದಳು. ಹೆಂಗಸಾದವಳೇ ಮೊದಲು ಮಾತನಾಡಿದಳೆಂದು ಈeóÁನಾಗಿ ಅಸಮಾಧಾನವಾಯಿತು. ಆದರೂ ಅವರಿಬ್ಬರೂ ಕೂಡಿಕೊಂಡು ಕೆಲವು ದ್ವೀಪಗಳನ್ನು ಸೃಷ್ಟಿ ಮಾಡಿದರು. ಇವು ಸಮರ್ಪಕವಾಗಿರಲಿಲ್ಲ. ಇತರ ದೇವತೆಗಳೊಂದಿಗೆ ಸಮಾಲೋಚನೆ ನಡೆಸಿದಾಗ ಹೆಂಗಸು ಮೊದಲು ಮಾತನಾಡಿದುದೇ ಇದಕ್ಕೆ ಕಾರಣವೆಂದು ತಿಳಿಸಿದರು. ಆಗ ದಂಪತಿಗಳು ಮತ್ತು ಮೊದಲಿನಂತೆಯೇ ಕಂಬವನ್ನು ಸುತ್ತಿಬಂದು ಇಸನಗಿ 'ಎಂಥ ಚೆಲುವ!' ಎಂಬ ಉದ್ಗಾರವನ್ನು ಮೊದಲು ತೆಗೆದ. ಅನಂತರ ಅವರು ಕೂಡಿಕೊಂಡಾಗ ಸೊಗಸಾದ ದ್ವೀಪಗಳಾದುವು. ಈಗಿನ ಜಪಾನ್ ಹೀಗೆ ಆದುದು. ಇತರ ಪ್ರಕೃತಿ ದೇವತೆಗಳೂ ಹೀಗೆಯೇ ಮೈದಳೆದವರು.
ವಾಯುದೇವತೆ, ವೃಕ್ಷದೇವತೆ, ಪರ್ವತದೇವತೆ ಮೊದಲಾದವರೆಲ್ಲ ಬಂದಮೇಲೆ ಈ ದಂಪತಿಗಳು ಅಗ್ನಿದೇವತೆಯನ್ನೂ ಪಡೆದು. ಆದರೆ ಅಗ್ನಿ ಹುಟ್ಟಿದೊಡನೆ ತಾಯಿಯಾದ ಈeóÁನಾಮೀಗೆ ಅಸಾಧ್ಯವಾದ ಬೇನೆಯುಂಟಾಯಿತು. ಅವಳ ವಾಂತಿಯಿಂದ, ಮೂತ್ರದಿಂದ, ಪುರೀಷದಿಂದ ಇತರ ದೇವತೆಗಳು ಹುಟ್ಟಿದರು. ಆದರೆ ಇಸನಮಿ ತಾಪವನ್ನು ತಾಳಲಾರದೆ ಸತ್ತುಹೋದಳು. ವಿರಹದಿಂದ ಇಸನಮಿ ಅಳತೊಡಗಿದ. ಅವನ ಕಣ್ಣೀರು ನದಿಯಾಗಿ ಹರಿಯತೊಡಗಿತು; ಇದೇ ದುಃಖನದಿ. ತನ್ನ ಮಡದಿಯನ್ನು ಕೊಂದನೆಂದು ಅವನಿಗೆ ಅಗ್ನಿಯ ಮೇಲೆ ಕೋಪ ಬಂದು ಕತ್ತಿಯಿಂದ ಅವನ ಕತ್ತು ಕತ್ತರಿಸಿದ. ಕತ್ತಿಯಿಂದ ಕೆಳಗೆ ಬಿದ್ದ ರಕ್ತದ ಹನಿಗಳು ಎಂಟು ದೇವತೆಗಳಾದುವು. ಇಷ್ಟಾದರೂ ಸಮಾಧಾನಗೊಳ್ಳದೆ ಈeóÁನಾಗೀ ತನ್ನ ಹೆಂಡತಿಯನ್ನು ಅರಸಿಕೊಂಡು ನರಕಕ್ಕೆ ಹೋದ. ಅಲ್ಲಿ ಈeóÁನಾಮೀ ಅವನನ್ನು ಭೇಟಿಯಾದಳು; ಆದರೆ ನರಕದ ಅನ್ನವನ್ನು ಉಂಡಿದ್ದ ಅವಳಿಗೆ ಭೂಮಿಗೆ ಹಿಂದಿರುಗುವ ಮನಸ್ಸಾಗಲಿಲ್ಲ. ತಾನು ನರಕದೊಡೆಯನನ್ನು ಕೇಳಿಕೊಂಡು ಬರುತ್ತೇನೆಂದು ಅವನ ಅರಮನೆಯ ಬಳಿ ಬಂದು ಗಂಡಸು ತನ್ನನ್ನು ಮೆನಯೊಳಗೆ ಹಿಂಬಾಲಿಸಬಾರದೆಂದು ತಿಳಿಸಿ ಒಳಗೆ ಹೋದಳು. ಈeóÁನಾಗೀ ಕುತೂಹಲವನ್ನು ತಡೆಯಲಾರದೆ ಕಾಣದಂತೆ ಅವಳನ್ನು ಹಿಂಬಾಲಿಸಿದ. ಮನೆಯೊಳಗೆ ಕಾಲಿಟ್ಟೊಡನೆ ಆಕೆಯ ಮೈಯೆಲ್ಲ ಕೊಳೆತು ಹುಳುಗಳು ಓಡಾಡತೊಡಗಿದುವು; ಎಂಟು ಗುಡುಗಿನ ಪಿಶಾಚಿಗಳು ಅವಳನ್ನು ಸುತ್ತಿವರಿದುವು. ಇದನ್ನು ನೋಡಿದ ಈeóÁನಾಗೀಗೆ ಗಾಬರಿಯಾಗಿ ಹಿಂದಕ್ಕೆ ಓಡತೊಡಗಿದ. ಈ ಶಬ್ದವನ್ನು ಕೇಳಿ ಈeóÁನಾಮೀ ನನ್ನ ಮಾತನ್ನು ಮೀರಿದ್ದೀಯೆ; ನನ್ನನ್ನು ಅವಮಾನಗೊಳಿಸಿದ್ದೀಯೆ ಎಂದು ಸಿಟ್ಟಿನಿಂದ ನುಡಿದು ಅವನನ್ನು ಹಿಡಿದು ತರಲು ನರಕದ ಕುರೂಪಿ ಹೆಂಗಸರನ್ನು ಅಟ್ಟಿದಳು. ಇವರಿಂದಲೂ ಹಿಂಬಾಲಿಸಿ ಬಂದ ಎಂಟು ಗುಡುಗಿನ ಪಿಶಾಚಿಗಳಿಂದಲೂ ತಪ್ಪಿಸಿಕೊಂಡು ಅವನು ವೇಗವಾಗಿ ಓಡಿ ನರಕದಿಂದ ಮೇಲೆ ಬಂದು ನರಕದ ಬಾಗಿಲಿಗೆ ದೊಡ್ಡದೊಂದು ಬಂಡೆಯನ್ನು ಅಡ್ಡವಾಗಿರಿಸಿದ. ಇತ್ತಕಡೆ ಈeóÁನಾಗೀ, ಅತ್ತಕಡೆ ಈeóÁನಾಮೀ ಒಬ್ಬರನ್ನೊಬ್ಬರು ಬಯ್ದಾಡಿ ಬೇರೆಯಾದರು.

ತಾನು ನರಕಕ್ಕೆ ಹೋಗಿಬಂದು ಕುಲಷಿತನಾದೆನೆಂದು ಈeóÁನಾಗೀ ತ್ಸುಕಿಜಿ ದ್ವೀಪಕ್ಕೆ ಹೋಗಿ, ಹ್ಯುಗ ಪ್ರದೇಶದಲ್ಲಿರುವ ತಕಿಬಾನ ನದಿಯಲ್ಲಿ ಸ್ನಾನ ಮಾಡಿ ಶುದ್ಧವಾದ. ನರಕಕ್ಕೆ ಹೋದಾಗ ತಾನು ಹಿಡಿದಿದ್ದ ಕೋಲನ್ನು ಎಸೆದಾಗ ಅದರಿಂದ ಒಂದು ದೇವತೆ ಹುಟ್ಟಿತು. ನಾಲ್ಕು ರಸ್ತೆಗಳು ಸೇರುವ ಕಡೆ ಅನಿಷ್ಟ ಪರಿಹಾರಕ್ಕೆಂದು ಈ ದೇವತೆಯನ್ನು ನಿಲ್ಲಿಸುತ್ತಾರೆ. ನದಿಯಲ್ಲಿ ಮುಳುಗಿದಾಗ ನರಕದಲ್ಲಿ ತಾನು ಅಂಟಿಸಿಕೊಂಡಿದ್ದ ಕೊಳೆಗಳು ಮೇಲೆ ಬಂದು ಅದರಿಂದ ಇಬ್ಬರು ದುಷ್ಟದೈವಗಳು ಮೈದಳೆದುವು. ಅವನ ಮೈಲಿಗೆ ಬಟ್ಟೆಯನ್ನು ದೂರ ಎಸೆಯಲು ಅದರಿಂದ ಕೆಲವು ದೇವತೆಗಳು ಕಾಣಿಸಿಕೊಂಡುವು. ಈ ದುಷ್ಟಶಕ್ತಿಗಳಿಗೆ ಪ್ರತಿಯಾಗಿ ಈಜಾóನಾಗೀ ಇನ್ನೆರಡು ದೇವತೆಗಳನ್ನು ಸೃಷ್ಟಿ ಮಾಡಿದ; ದೋಷಗಳನ್ನು ಸರಿಪಡಿಸುವ ದೇವತೆಗಳಿವು. ತನ್ನ ಎಡಗಣ್ಣನ್ನು ತೊಳೆದುಕೊಂಡಾಗ ಸೂರ್ಯಾಣಿ ದೇವತೆಯೂ (ಆಮಾತಿರಾಸು) ಬಲಗಣ್ಣನ್ನು ತೊಳೆದುಕೊಂಡಾಗ ಚಂದ್ರದೇವತೆಯೂ (ತ್ಸುಕಿಯೋಮಿ) ಮೈದಳೆದರು. ಜಪಾನೀ ಪುರಾಣ ಕಥೆಗಳಲ್ಲಿ ಸೂರ್ಯ ಹೆಣ್ಣು ದೇವತೆ ಚಂದ್ರ ಗಂಡುದೇವತೆ. ಮೂಗನ್ನು ತೊಳೆದುಕೊಳ್ಳಲು ಸೂಸ-ನಾ-ವಾ ದೇವತೆ ಹೊರಬಂದ. ತಂದೆಯ ಅಪ್ಪಣೆಯಂತೆ ಸೂರ್ಯಾಣಿಯೂ ಚಂದ್ರನೂ ಸ್ವರ್ಗ ಭೂಮಿಗಳನ್ನು ಆಕ್ರಮಿಸಿಕೊಂಡರು; ಹಗಲಿಗೆ ರಾತ್ರಿಗೆ ಒಡೆಯರಾದರು. ಸುಸಾನೂ ಅಳಲು ಮೊದಲಿಟ್ಟು ತನ್ನ ತಾಯಿಯ ಬಳಿ ಹೋಗಬೇಕೆಂದು ಹಟ ಮಾಡಲು, ಇಸನಗಿ ಅವನನ್ನು ಹೊಡೆದಟ್ಟಿಬಿಟ್ಟ.

ತಾಯಿಯ ಬಳಿ ಹೋಗುವ ಮೊದಲು ಸೂ-ನಾ-ವಾ ತನ್ನ ಅಕ್ಕ ಆಮಾತಿರಾಸುವನ್ನು (ಸೂರ್ಯಾಣಿ) ಕಂಡು ಹೋಗಲು ನಿಶ್ಚಯಿಸಿ ಸ್ವರ್ಗಕ್ಕೇರಿದ. ಏರುವ ರಭಸದಲ್ಲಿ ಬೆಟ್ಟಗಳು ಅಲುಗಾಡಿದುವು. ನದಿಗಳು ಅಲ್ಲೋಲಕಲ್ಲೋಲವಾದುವು. ಭೂಮಿ ನಡುಗಿತು. ಇದನ್ನು ಕಂಡ ಆಮಾತಿರಾಸು ತನ್ನ ಬಿಲ್ಲು ಬಾಣಗಳನ್ನು ಹಿಡಿದೇ ತಮ್ಮನನ್ನು ಎದುರುಗೊಂಡಳು. ಬಂದ ಕಾರಣವೇನೆಂದು ಕೇಳಿದಳು. ತಾನು ಸುಮ್ಮನೆ ಆಕೆಗೆ ಹೇಳಿ ಹೋಗಲು ಬಂದೆನೆಂದೂ ತನ್ನ ತಾಯಿಯ ರಾಜ್ಯಕ್ಕೆ ಹೊರಟಿರುವುದಾಗಿಯೂ ಹೇಳಿದ ಸೂಸ-ನಾ-ವಾ ತನ್ನ ಕತ್ತಿಯನ್ನು ಆಕೆಗೆ ಕೊಟ್ಟು ಮೂರು ಪಾಲಾಗಿ ಒಡೆಯಲು ತಿಳಿಸಿದ. ಆಕೆ ಹಾಗೆ ಮಾಡಲು ಅದನ್ನು ಅವನು ಬಾಯಿಗೆ ಹಾಕಿಕೊಂಡು ಅಗಿದು ಉಸಿರಾಡಿಸಿದಾಗ ಮೂವರು ಸ್ತ್ರೀದೇವತೆಗಳು ಮೈದಳೆದರು. ಅನಂತರ ಸೂ-ನಾ-ವಾ ತನ್ನ ಅಕ್ಕ ಹಾಕಿಕೊಂಡಿದ್ದ ಐದೆಳೆ ರತ್ನಹಾರವನ್ನು ಸ್ವಲ್ಪ ಕೊಡೆಂದು ಕೇಳಿದ. ಆಕೆ ಕೊಟ್ಟಾಗ ಅದನ್ನು ಹಲ್ಲಿನಿಂದ ಅಗಿದು. ಉಸಿರಾಡಿದ; ಐವರು ಪುರಷ ದೇವತೆಗಳು ಕಾಣಿಸಿಕೊಂಡರು. ಆಮಾತಿರಾಸು ಅವರೆಲ್ಲ ತನ್ನ ರತ್ನಹಾರದಿಂದ ಹುಟ್ಟಿದುದರಿಂದ ತನ್ನ ಮಕ್ಕಳೆಂದು ವಾದಿಸಿದಳು. ಇವರೆಲ್ಲರೂ ಪಿತೃದೇವತೆಗಳು; ಇವರಲ್ಲಿ ಜ್ಯೇಷ್ಠ ನಾದವ ಜಪಾನೀ ಚಕ್ರವರ್ತಿ ವಂಶದ ಮೂಲಪುರಷನೆಂಬ ಕಲ್ಪನೆಯಿದೆ.

ಆಮಾತಿರಾಸುವಿನ ವಾದ ಸೂಸ-ನಾ-ವಾಗೆ ಹಿಡಿಸಲಿಲ್ಲ. ಆಕೆ ಸಿದ್ಧಪಡಿಸಿದ್ಧ ಬತ್ತದ ಬೆಳೆಯನ್ನೆಲ್ಲ ನಾಶಪಡಿಸಿದ; ಆಕೆಯ ದೇವಾಲಯಗಳನ್ನೆಲ್ಲ ಅಪವಿತ್ರಗೊಳಿಸಿದ. ಮಾಯಾಕುದುರೆಯೊಂದನ್ನು ಆಕೆಯಮೇಲೆ ಹರಿಬಿಟ್ಟಾಗ ಆಕೆ ಹೆದರಿ ಸ್ವರ್ಗದ ಗವಿಯೊಂದರಲ್ಲಿ ಅಡಗಿಕೊಂಡಳು. ಇದೇ ಜಪಾನೀ ಪುರಾಣಗಳಲ್ಲಿ ಸೂರ್ಯ ಗ್ರಹಣದ ವಿವರಣೆ. ಅಂತೂ ಜಗತ್ತಿನಲ್ಲೆಲ್ಲ ಕತ್ತಲೆ ಕವಿಯಿತು. ಈ ಕಾಳಕತ್ತಲೆಯಲ್ಲಿ ದುಷ್ಟಶಕ್ತಿಗಳು ತಾವೇತಾವಾಗಿ ಮೆರೆಯತೊಡಗಿದುವು. ಆಗ ಎಂಟುನೂರು ಕೋಟಿ ದೇವತೆಗಳೆಲ್ಲರೂ ಸಭೆ ಸೇರಿ ಸೂರ್ಯಾಣಿಯನ್ನು ಗವಿಯಿಂದ ಹೊರತರುವ ಉಪಾಯವನ್ನು ಹುಡುಕಿದರು. ಮುಂಜಾನೆ ಕೂಗುವ ಹುಂಜಗಳನ್ನೆಲ್ಲ ಒಟ್ಟುಗೂಡಿಸಿದರು, ದಿವ್ಯವಾದ ಕನ್ನಡಿಯೊಂದನ್ನು ಮಾಡಿ, ರತ್ನಹಾರಗಳಿಂದ ಸಕಕಿ ವೃಕ್ಷವನ್ನು ಸಿಂಗರಿಸಿ ಅದರ ರೆಂಬೆಗಳ ಮೇಲೆ ಕನ್ನಡಿಯನ್ನಿರಿಸಿದರು. ಅಮಾ-ನೋ-ಉಸುಮೆ ಎಂಬ ದೇವತೆ ಎಲೆ ಹೂಗಳಿಂದ ಅಲಂಕರಿಸಿಕೊಂಡು, ಆಮಾತಿರಾಸು ಅಡಗಿಕೊಂಡಿದ್ದ ಗವಿಯ ಹೊರಗೆ ನರ್ತನ ಮಾಡಲಾರಂಭಿಸಿದಳು. ಮಾಡುತ್ತ ಮಾಡುತ್ತ ಮೈಮುಚ್ಚಿಕೊಂಡಿದ್ದ ಎಲೆಗಳನ್ನೆಲ್ಲ ಕಿತ್ತೊಗೆದು ಬೆತ್ತಲೆಯಾಗಿ ಬಿಟ್ಟಳು. ನೆರೆದಿದ್ದ ದೇವತೆಗಳು ಗಟ್ಟಿಯಾಗಿ ನಗತೊಡಗಿದರು. ಈ ಶಬ್ದವನ್ನು ಕೇಳಿ ಒಳಗಿದ್ದ ಆಮಾತಿರಾಸು ಹೊರಗೆ ಬಂದಳು. ಗವಿಯ ಬಾಗಿಲ ಬಳಿ ಬಂದೊಡನೆ ಶಕ್ತಿದೇವತೆ ಆಕೆಯ ಕೈಹಿಡಿದು ಹೊರಗೆಳೆದ ; ಇತರ ದೇವತೆಗಳು ಗವಿಯ ಬಾಗಿಲನ್ನು ಮುಚ್ಚಿಬಿಟ್ಟರು. ಮತ್ತೆ ಗವಿಯಲ್ಲಿ ಅಡಗಿಕೊಳ್ಳಲಾರದೆ ಸೂರ್ಯಾಣಿ ಜಗತ್ತನ್ನು ಎಂದಿನಂತೆ ಬೆಳಗತೊಡಗಿದಳು. ಆಕೆಯನ್ನು ಹೆದರಿಸಿದ್ದ ಸೂಸ-ನಾ-ವಾನನ್ನು ದೇವತೆಗಳು ಹಿಡಿದು ದಂಡಿಸಿ ಸ್ವರ್ಗದಿಂದ ಹೊರದೂಡಿದರು.
ವಾಸ್ತವವಾಗಿ ಸೂಸ-ನಾ-ವಾ ದುಷ್ಟದೇವತೆಯಲ್ಲ. ಅವನ ಎರಡು ಜೀವಗಳಲ್ಲಿ ರಜೋಗುಣ ಪ್ರಧಾನವಾದ ಜೀವ ಮೇಲಿದ್ದಾಗ ಅವನು ಹಾಗಾಗುತ್ತಾನಷ್ಟೆ. ಸತ್ತ್ವ ಪ್ರಧಾನ ಜೀವ ಮೇಲಿದ್ದಾಗ ಆತ ಒಳ್ಳೆಯ ದೇವತೆ. ವ್ಯವಸಾಯಕ್ಕೆ ಅಭಿಮಾನಿದೇವತೆಯಾದ ಸೂಸ-ನಾ-ವಾ ದೋಹದ ಶಕ್ತಿಯೆಂದೇ ಎಣಿಕೆ. ಗುಡುಗು, ಸಿಡಿಲು, ಬಿರುಗಾಳಿ, ಮಳೆ ಎಲ್ಲವೂ ಅವನಿಂದಲೇ. ಅವನಿಗೂ ಹಾವುಗಳಿಗೂ ಸಂಬಂಧ ವಿಶೇಷವಾದುದು. ಅಹಿರಾಜ (ಡ್ರೇಗನ್) ಗುಡುಗಿನ ಒಡೆಯನೂ ಹೌದೆಂದು ಜಪಾನೀ ಪುರಾಣಗಳಲ್ಲಿ ಬರುವ ವಿವರ. ಸ್ವರ್ಗದಿಂದ ಓಡಿಬಂದ ಸೂಸಾನೂ ಜಪಾನಿನ ಇಜûೂಮೋ ಪ್ರಾಂತ್ಯಕ್ಕೆ ಬಂದ. ಅಲ್ಲಿ ಒಂದು ಹುಡುಗಿಯ ಪಕ್ಕದಲ್ಲಿ ಒಬ್ಬ ಮುದುಕ ಒಬ್ಬ ಮುದುಕಿ ಕುಳಿತು ಅಳುತ್ತಿದ್ದರು. ಕಾರಣವೇನೆಂದು ಕೇಳಲು, ಅವನಿಗೆ ಎಂಟು ಮಂದಿ ಹೆಣ್ಣು ಮಕ್ಕಳಿದ್ದರೆಂದೂ ವರ್ಷಕ್ಕೊಮ್ಮೆ ಎಂಟು ಹೆಡೆಗಳ ಘಟಸರ್ಪವೊಂದು ಬಂದು ಒಂದು ಹುಡುಗಿಯನ್ನು ತಿಂದು ಹೋಗುವುದೆಂದೂ ಹೀಗೆ ಏಳು ಮಕ್ಕಳನ್ನು ಕಳೆದುಕೊಂಡು ಈ ವರ್ಷ ಉಳಿದ ಮಗಳೂ ಅದರ ಬಾಯಿಗೆ ತುತ್ತಾಗುವುದೆಂದೂ ಮುದುಕ ಹೇಳಿದ. ತಾನು ಆಮಾತಿರಾಸುವಿನ ತಮ್ಮನೆಂದೂ ತನಗೆ ಹುಡುಗಿಯನ್ನು ಕೊಡಬೇಕೆಂದೂ ಕೇಳಿಕೊಳ್ಳಲು, ಅವರು ಸಂತೋಷದಿಂದ ಒಪ್ಪಿದರು. ಒಡನೆಯೇ ಸೂಸ-ನಾ-ವಾ ಹುಡುಗಿಯನ್ನು ಬಾಚಣಿಗೆಯನ್ನಾಗಿ ಮಾರ್ಪಡಿಸಿ ತನ್ನ ತಲೆಕೂದಲಿನಲ್ಲಿ ಸಿಕ್ಕಿಸಿಕೊಂಡ. ಅನಂತರ ಎಂಟು ಬಟ್ಟಲುಗಳಲ್ಲಿ ಅಕ್ಕಿ ಹೆಂಡವನ್ನು ತುಂಬಿಟ್ಟು ಘಟಸರ್ಪಕ್ಕಾಗಿ ಕಾದುಕುಳಿತ. ಹೆಂಡದ ವಾಸನೆಯಿಂದ ಆಕರ್ಷಿತವಾದ ಘಟಸರ್ಪ ತನ್ನ ಎಂಟು ತಲೆಗಳನ್ನು ಎಂಟು ಬಟ್ಟಲುಗಳಿಗೆ ಹಾಕಿ ಕುಡಿದು ಹೆಂಡದ ಮತ್ತಿನಿಂದ ನಿದ್ರೆ ಮಾಡಿತು. ಆಗ ಸೂಸ-ನಾ-ವಾ ತನ್ನ ಕತ್ತಿಯಿಂದ ಸರ್ಪವನ್ನು ಚೂರುಚೂರಾಗಿ ಕತ್ತರಿಸಿಬಿಟ್ಟ.

ಸರ್ಪದ ಬಾಲದಲ್ಲಿ ಅದ್ಭುತವಾದ ಕತ್ತಿಯೊಂದಿತ್ತು. ಸೂಸ-ನಾ-ವಾ ಅದನ್ನು ತನ್ನ ಅಕ್ಕ ಆಮಾತಿರಾಸುವಿಗೆ ಉಡುಗೊರೆಯಾಗಿ ಕೊಟ್ಟ. ಪುರಾಣಗಳಲ್ಲಿ ಈ ಕತ್ತಿಗೆ ಕುಸನಗಿ ಎಂಬ ಹೆಸರಿದ್ದು ಇದು ಜಪಾನೀ ಚಕ್ರವರ್ತಿಗಳ ರಾಜಲಾಂಛನಗಳಲ್ಲೊಂದಾಗಿದೆ. ನಗಾಯಿಯ ನಗರದ ಬಳಿಯಿರುವ ಅತ್ಸುತ ದೇವಾಲಯದಲ್ಲಿ ಈ ಕತ್ತಿಯನ್ನು ಇರಿಸಲಾಗಿದೆಯೆಂದು ಹೇಳುತ್ತಾರೆ. ಹೀಗೆ ಘಟಸರ್ಪವನ್ನು ಕೊಂದಮೇಲೆ ಸುಗ ಎಂಬಲ್ಲಿ ಅರಮನೆಯನ್ನು ಕಟ್ಟಿಕೊಂಡು ಸೂಸ-ನಾ-ವಾ ತನ್ನ ಹೆಂಡತಿಯೊಂದಿಗೆ ಇರತೊಡಗಿದ. ಅವರ ಮಗ ಓ-ಕುನಿ-ನುಷಿ ಎಂಬಾತನೇ ಇಜûೂಮೋ ಪ್ರಾಂತ್ಯದ ಒಡೆಯನಾದ.
ಓ-ಕುನಿ-ನುಷಿ ಭಾರತದ ಧನ್ವಂತರಿಯಿದ್ದಂತೆ ವೈದ್ಯದೇವತೆ; ತಾಂತ್ರಿಕ ಮತ್ತು ಅಭಿಚಾರಿಕ ಕ್ರಿಯೆಗಳಿಗೂ ಅವನಿಗೂ ತೀರದ ನಂಟು. ಜಪಾನೀ ವೈದ್ಯ ಪದ್ಧತಿಗೆ ಅವನೇ ಪ್ರವರ್ತಕ. ಅವನ ಬಗ್ಗೆಯೂ ಜಪಾನೀ ಪುರಾಣಗಳಲ್ಲಿ ಹಲವಾರು ಸ್ವಾರಸ್ಯವಾದ ಸಾಹಸದ ಕಥೆಗಳಿವೆ.

ಜಪಾನೀ ಪುರಾಣಗಳಲ್ಲಿ ಎಂಟು ನೂರು ಕೋಟಿ ದೇವತೆಗಳಿದ್ದಾರೆ. ಪ್ರತಿಯೊಂದು ಹಳ್ಳಿಗೂ ಕೇರಿಗೂ ಒಂದು ದೇವತೆ ಇರುವುದರಿಂದ ಈ ಸಂಖ್ಯೆಯೇನು ಉತ್ಪ್ರೇಕ್ಷೆಯಲ್ಲ. ಆದರೆ ಪುರಾಣಕಥೆಗಳಲ್ಲೆಲ್ಲ ಪ್ರಧಾನ ದೇವತೆಯೆಂದರೆ ಆಮಾತಿರಾಸು. ಪ್ರತಿದಿನವೂ ಬೆಳಗ್ಗೆ ಜಪಾನೀಯರು ಸೂರ್ಯನ ಕಡೆ ತಿರುಗಿ ಚಪ್ಪಾಳೆ ತಟ್ಟಿ ಪೂಜೆ ಸಲ್ಲಿಸುತ್ತಾರೆ. ಮೊದಲಿಗೆ ಆಮಾತಿರಾಸು ಜಪಾನೀ ರಾಜವಂಶದಲ್ಲಿ ಮಾತ್ರ ಪೂಜೆಗೊಳ್ಳುತ್ತಿದ್ದ ದೇವತೆ, ರಾಜವಂಶದ ಪೂರ್ವಜಳೆನ್ನುವ ಕಾರಣದಿಂದ. ಕ್ರಿಸ್ತಪೂರ್ವ 97ರ ಸುಮಾರಿಗೆ ಚಕ್ರವರ್ತಿ ಸುಜಿನ್ ಸೂರ್ಯಪೂಜೆಗೆಂದು ದೊಡ್ಡ ಗುಡಿಯನ್ನು ಕಟ್ಟಿಸಿ ತನ್ನ ಮಗಳನ್ನೇ ಅಲ್ಲಿ ಅರ್ಚನೆಗೆ ಬಿಟ್ಟಿದ್ದ. ರಾಜವಂಶದವರು ಸೌರಪಂಥವನ್ನು ಎತ್ತಿ ನಿಲ್ಲಿಸಿದರು. ಕ್ರಿಸ್ತಪೂರ್ವ 20ರ ಸುಮಾರಿಗೆ ಇಸೆ ಎಂಬಲ್ಲಿ ಸೂರ್ಯನ ಭವ್ಯವಾದ ಗುಡಿಯೊಂದು ಮೈದಳೆಯಿತು. ಆ ಕಾಲದಿಂದ ಇಲ್ಲಿಯ ವರೆಗೆ, ಮತ್ತೆ ಮತ್ತೆ ದುರಸ್ತಿಯ ಕೆಲಸ ನಡೆಯದಿದ್ದರೂ ಪ್ರಾಚೀನ ಶೈಲಿಯ ಕಟ್ಟಡ ಉಳಿದುಕೊಂಡು ಬಂದಿದೆ. ಈ ಗುಡಿಯ ಗರ್ಭಗೃಹದಲ್ಲಿ ಎಂಟು ಕೋನಗಳ ಕನ್ನಡಿಯೊಂದನ್ನಿರಿಸಿದ್ದಾರೆ. ದೇವತೆಯ ಶಕ್ತಿ ಇದರಲ್ಲಿರುವುದೆಂದು ಕಲ್ಪನೆ. ದೇವತೆಗಳು ಆಮಾತಿರಾಸುವನ್ನು ಗುಹೆಯಿಂದ ಹೊರಗೆ ತರಲು ಬಳಸಿದ ಕನ್ನಡಿಯಿದೆಂದು ಕಥೆ ಹೇಳುತ್ತದೆ. ದೇವಾಲಯದ ಆವರಣದಲ್ಲಿ ನೂರಾರು ಹುಂಜಗಳು ಓಡಾಡುತ್ತಿರುತ್ತವೆ; ಸೂರ್ಯನನ್ನು ಮೊಟ್ಟ ಮೊದಲು ಪೂಜೆ ಮಾಡುವ ಪವಿತ್ರ ಪಕ್ಷಿಯಿವೆಂದು ಅವಕ್ಕೆ ಅಲ್ಲಿ ತುಂಬ ಮರ್ಯಾದೆ. ಹಲವಾರು ಕಾಲುಗಳಿರುವ ಯತ-ಗರಸು ಧರ್ಮದವರು ಗಾಳಿಪಟ ಮತ್ತು ಬಾಣಗಳನ್ನೂ ಸೂರ್ಯನ ಲಾಂಛನಗಳೆಂದು ಬಗೆಯುತ್ತಾರೆ. ಸೂರ್ಯನನ್ನು ಸ್ತ್ರೀ ದೇವತೆಯೆಂದು ಬಗೆದಿರುವುದು ಜಪಾನೀಯರಿಗೆ ವಿಶಿಷ್ಟವಾದುದು. ಷಿಂಟೋಧರ್ಮದಲ್ಲಿ ತಾಂತ್ರಿಕ ಕ್ರಿಯೆಗಳನ್ನು ನಡೆಸುತ್ತಿದ್ದ ಪುರೋಹಿತವರ್ಗ ಹೆಂಗಸರದ್ದೇ ಆಗಿದ್ದುದು ಇದಕ್ಕೆ ಕಾರಣವೆಂದು ತೋರುತ್ತದೆ.

ಇಷ್ಟಾದರೂ ಸೂರ್ಯಾಣಿ ಸರ್ವಶಕ್ತೆಯಲ್ಲ. ತನ್ನ ಕೆಲಸಕ್ಕೆ ಮೊದಲು ಉಳಿದೆಲ್ಲ ದೇವತೆಗಳ ಸಲಹೆಯನ್ನೂ ಪಡೆಯುತ್ತಾಳೆ. ಅವಳ ಆಡಳಿತ ಸ್ವರ್ಗದಲ್ಲಿ ಮಾತ್ರ; ಸಮುದ್ರದ ಅಧೋಲೋಕಗಳ ಮೇಲೆ ಆಕೆಯ ಒಡೆತನವಿಲ್ಲ. ಭೂಮಿಯಿಂದ ವಿವರಗಳನ್ನು ಪಡೆಯಲು ಆಕೆ ಕೆಲವು ಸುದ್ದಿಗಾರರನ್ನು ನೇಮಿಸಿಕೊಂಡಿದ್ದಾಳೆ. ಆಕೆಯ ಕಾರ್ಯನಿರ್ವಹಣೆಯಲ್ಲಿ ತಕಮಿ-ಮುಸುಬಿ ಎಂಬ ದೇವತೆ ನೆರವಾಗುತ್ತಾನೆ. ಆಕೆಯ ತಂಗಿ ವಕಹಿರು-ಮೆ ಮತ್ತು ಹಿರುಕೊ ಇವರೂ ಸೌರಪಂಥದ ದೇವತೆಗಳೇ. ಚಂದ್ರದೇವತೆ ತ್ಸುಕಿ-ಯೋಮಿ ಕಾಲಕ್ರಮದಲ್ಲಿ ಜನಪ್ರೀತಿಯನ್ನು ಪಡೆದ. ಜಪಾನೀ ಪಂಚಾಂಗದಲ್ಲಿ ಪ್ರಮುಖವಾಗಿ ಬರುವ ದೇವತೆ ಈತ. ಇಸೆ ಮತ್ತು ಕಾಡೊನೊಗಳಲ್ಲಿ ಈ ದೇವತೆಗಳಿಗೆ ಗುಡಿಗಳಿವೆ. ಇಲ್ಲಿಯೂ ಗರ್ಭಗೃಹದಲ್ಲಿ ಕನ್ನಡಿಗಳನ್ನಿಟ್ಟಾಗ ಅದರಲ್ಲಿ ಚಂದ್ರನ ಸತ್ತ್ವ ಮೂಡಿತೆಂಬ ಭಾವನೆಯಿದೆ.

ಚಂದ್ರನಲ್ಲಿ ಮೊಲವಿರುವುದು ಜಪಾನೀ ಪುರಾಣಗಳಲ್ಲಿ ವಿಶೇಷವಾಗಿ ಬರುವ ವಿವರ : ಮೊಲ ಅಲ್ಲಿರುವುದಕ್ಕೆ ಹಲವಾರು ಕಥೆಗಳಿವೆ. ಒರಳಿನಲ್ಲಿ ಬತ್ತವನ್ನು ಕುಟ್ಟುತ್ತಿರುವಂತೆ ಚಂದ್ರನಲ್ಲಿರುವ ಮೊಲವನ್ನು ಅವರು ಚಿತ್ರಿಸಿ ಕೊಳ್ಳುತ್ತಾರೆ. ಚಂದ್ರನಲ್ಲದೆ ಮಳೆರಾಯ (ತಕಓ-ಕಮಿ), ಗಾಳಿರಾಯ (ಶಿನಾ-ತ್ಸು-ಹಿಕೊ), ಬೆಟ್ಟರಾಯರು (ಫೂಜೀಯಾಮದ ಶೀಕರದ ಮೇಲಿರುವ ಸೆಂಗೆನ್-ಸಮ, ಷಿನಾನೋ ಪ್ರಾತ್ಯದಲ್ಲಿ ಓಂತಕೆ-ಸನ್ ಮತ್ತು ನಂತಾಯ್, ಎಲ್ಲ ಬೆಟ್ಟಗಳೊಡೆಯ ಓ-ಯಮ-ತ್ಸು-ಮಿ ಮೊದಲಾದವರು), ನದೀ ದೇವತೆಗಳು (ಕವಾನೋ-ಕಮಿ), ಸಮುದ್ರ ದೇವತೆ (ಓ-ವತ-ತ್ಸು-ಮಿ), ಅಗ್ನಿದೇವತೆ (ಕಗು-ಸುಚಿ), ಮಾರ್ಗಪಾಲ ದೇವತೆಗಳು (ಚಿಮತ-ನೋ-ಕಮಿ ಮೊದಲಾದವರು), ಅಡುಗೆ ಮನೆ ದೇವತೆಗಳು (ಓಕಿ-ತ್ಸು-ಹಿಕೊ) ಮೊದಲಾದವರೆಲ್ಲ ಜಪಾನೀ ಪುರಾಣಗಳಲ್ಲಿ ಬರುತ್ತಾರೆ. ಹಲವಾರು ವೀರರೂ ಚಕ್ರವರ್ತಿಗಳೂ ಸತ್ತ ಬಳಿಕ ದೇವತೆಗಳಾದರು. ಜುನ್ನಿನ್ ಚಕ್ರವರ್ತಿ (750-764), ಚಕ್ರವರ್ತಿ ಸುತೋಕು (1124-1141), ಚಕ್ರವರ್ತಿ ಗೋ-ದಾಯ್ ಗೊ (1319-1338) ಮೊದಲಾದವರು ನಿದರ್ಶನಗಳು. ಜಪಾನಿನಲ್ಲಿ ಭೂಕಂಪ ಹೆಚ್ಚಾದುದರಿಂದ ಭೂಕಂಪದೇವತೆ ನೈ-ನೋ-ಕಮಿಯ ಕಲ್ಪನೆಯೂ ಇದೆ.

ನಾಲ್ಕನೆಯ ಶತಮಾನದ ಸುಮಾರಿಗೆ ಮಹಾಯಾನ ಬೌದ್ಧ ಪಂಥದ ವಿವರಗಳು ಇಲ್ಲಿ ನೆಲೆಗೊಂಡ ಬಳಿಕ ಬೌದ್ಧ ಕಥೆಗಳ, ಬೌದ್ಧ ಸಂತರ ಪ್ರಭಾವ ತಲೆದೋರಲಾರಂಭಿಸಿತು. ಅಮಿದನೆಂಬ (ಅಮಿತಾಭ) ಧ್ಯಾನಿಬುದ್ಧ ದೈನಿಚಿ-ನ್ಯೊರಾಯ್ (ಮಹಾವೈರೋಚನ), ಫುಗೆನ್ ಬೊಸತ್ಸು (ಸಮಂತಭದ್ರ ಬೋಧಿಸತ್ತ್ವ), ಕ್ವನ್ನೋನ್ (ಕ್ಯುಆನ್-ಯನ್, ಅವಲೋಕಿತೇಶ್ವರ), ಮಿರೋಕು (ಮೈತ್ರೇಯ) ಜಿಸೋ (ಕ್ಷಿತಿಗರ್ಭ), ಮೊಂಜು (ಮಂಜುಶ್ರೀ) ಮೊದಲಾದ ಬೋಧಿಸತ್ತ್ವರ ಕಥೆಗಳು ತೆಂಡಾಯ್, ಷಿಂಗಾನ್, ಕೀಗನ್ ಪಂಥಗಳಲ್ಲಿ ಪ್ರಚಲಿತವಾದುವು. ಇವರಲ್ಲಿ ಕ್ವನ್ನೋಸ್ ತುಂಬ ಜನಪ್ರೀತಿಯನ್ನು ಪಡೆದ ದೇವತೆ. ಇವನಿಗೆ ಅಲ್ಲಿ ಮಂದಿರಗಳೂ ಬಹಳ. ಸಹಸ್ರಮುಖ, ಸಹಸ್ರನೇತ್ರ, ಷಡ್ಭುಜ (ಚಿಂತಾಮಣಿಚಕ್ರ) ಏಕಾದಶಮುಖ, ಅಮೋಘಪಾಶ, ಹಯಗ್ರೀವ ಮೊದಲಾದುವೆಲ್ಲ ಈ ದೇವತೆಯ ಮೂರ್ತಿಗಳೇ. ಈ ದೇವತೆಗಳಿಗೆ ಅನುಚರರಾಗಿ ಹದಿನಾರು ರಾಹನ್‍ಗಳು (ಅರ್ಹಂತರು), ಇಪ್ಪತ್ತೆಂಟು ಪರಿಚಾರಕರು (ನಿಜುಹಚಿ ಬುಷು) ಸ್ತ್ರೀವೇಷಧಾರಿಯಾದ ಮರೀಚಿದೇವ (ಮರಿಷಿತೆನ್), ನಾಲ್ವರು ಲೋಕಪಾಲರು (ಷಿತೆನ್ನೊ) ಹಾರೀತಿಯೆಂಬ ಹೆಣ್ಣುದೇವತೆ (ಕಿಷಿಮೊಜಿನ್), ಕುಬೇರ (ಕೊಂಪಿರ) ಇವರೂ ಪೂಜೆಗೊಳ್ಳುತ್ತಾರೆ. ಇವರ ವಿಚಾರವಾಗಿಯೂ ಪುರಾಣ ಕಥೆಗಳು ಹೆಚ್ಚಾಗಿ ಬಳಕೆಯಲ್ಲಿವೆ.				(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ